Original Post by : ವಸಂತ್ ಕುಲಕರ್ಣಿ, ಸಿಂಗಪುರ ( Vasant Kulkarni, Singapore )

Venkatesh Gurunayakgulbarga

ಕ್ಯಾನ್ಸರ್ ಎಂಬ ಕೊಲೆಪಾತಕ ಗುಲ್ಬರ್ಗಾದ ಗಾಂಧಿಯನ್ನು ಬಲಿ ತೆಗೆದುಕೊಂಡಿದ್ದಾನೆ. ದೇಶದ ಕೆಲವೇ ಕೆಲವು ನಿಸ್ಪೃಹ ಸಮಾಜ ಸೇವಕರಲ್ಲಿ ಒಬ್ಬರಾದ ಹಿರಿಯ, ಆಜನ್ಮ ಬ್ರಹ್ಮಚಾರಿ ವೆಂಕಟೇಶ ಗುರುನಾಯಕ್ ಅವರು ರವಿವಾರ, ಜನವರಿ 8ರಂದು ನಿಧನರಾಗಿದರು. ಕುಷ್ಟ ರೋಗಿಗಳ ಆರೋಗ್ಯವಂತ ಮಕ್ಕಳಿಗಾಗಿ ಒಂದು ಆಸರೆ, ಅನಾಥ ಮಕ್ಕಳಿಗಾಗಿ ಒಂದು ಆಶ್ರಯ ತಾಣ ಮತ್ತು ಕಡೆಗಣಿಸಲ್ಪಟ್ಟ ಮತ್ತು ಅನಾಥ ವೃದ್ಧರಿಗಾಗಿ ಒಂದು ಆಶ್ರಮ ಇತ್ಯಾದಿ ಅನೇಕ ಮಹಾನ್ ಕಾರ್ಯಗಳನ್ನು ಸದ್ದಿಲ್ಲದೇ ಮಾಡಿ, ಅಂಥವರ ರಕ್ಷಣೆ ಮತ್ತು ಪಾಲನೆಗ ಸದಾ ಶ್ರಮಿಸುತ್ತಿದ್ದ ಜೀವವೊಂದು ಇಂದು ನಮ್ಮಿಂದ ದೂರವಾಗಿದೆ.

2010ರ ಮೇ ತಿಂಗಳಲ್ಲಿ ನಾನು ಅವರನ್ನು ಭೇಟಿ ಮಾಡಲು ಹೋದಾಗ ಅವರು ಆಗ ತಾನೇ ಬೆಂಗಳೂರಿನಲ್ಲಿ ಕೀಮೋಥೆರಪಿ ಮುಗಿಸಿಕೊಂಡು ಹಿಂತಿರುಗಿದ್ದರು. “ಸಾಕಷ್ಟು ಗುಣವಾಗಿದೆ” ಎಂದು ತುಂಬಾ ಗೆಲುವಿನಿಂದ ಹೇಳಿದ್ದರು. ಅಲ್ಲದೇ ನಾನು 2009ರಲ್ಲಿ ಅವರ ಬಗ್ಗೆ ಬರೆದ ಲೇಖನನನ್ನು ಓದಿದ ಅಮೆರಿಕದ ಕನ್ನಡ ಸಂಸ್ಥೆಯೊಂದು ಅವರ ಆಶ್ರಮವನ್ನು “ವರ್ಷದ ಶ್ರೇಷ್ಠ ಸ್ವಯಂ ಸೇವಾ ಸಂಸ್ಥೆ” ಎಂದು ಘೋಷಿಸಿ ಧನ ಸಹಾಯ ಮಾಡಿದ್ದನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಮುಂದೆ ತಾವು ಆರಂಭಿಸಬೇಕೆಂಬ ಇನ್ನೂ ಕೆಲವು ಯೋಜನೆಗಳ ಬಗ್ಗೆ, ಅವುಗಳ ರೂಪು-ರೇಷೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಅದರಲ್ಲೂ “ಸಂಧ್ಯಾದೀಪ” ಎಂಬ ವೃದ್ಧಾಶ್ರಮ ಮತ್ತು ಸಮಾಜದಿಂದ ಪರಿತ್ಯಜಿಸಲ್ಪಟ್ಟ ವಯಸ್ಕ ಅನಾಥರನ್ನು ಪೋಷಿಸಿ, ಸಮಾಜಕ್ಕೆ ಉಪಯುಕ್ತರಾಗುವಂತೆ ಅವರನ್ನು ಪರಿವರ್ತಿಸಿ ಅವರನ್ನು ಮುಖ್ಯಧಾರೆಗೆ ಕರೆತರುವ ತಮ್ಮ ಯೋಜನೆಗಳ ಬಗ್ಗೆ ಬಹಳ ಅತ್ಯುತ್ಸಾಹದಿಂದ ಮಾತನಾಡಿದ್ದರು. ಎಪ್ಪತ್ತೊಂದರ ಹಿರಿಯರಾದ ಅವರ ಜೀವನೋತ್ಸಾಹವನ್ನು ಮತ್ತು ನೊಂದವರಿಗಾಗಿ, ಶೋಷಿತರಿಗಾಗಿ ಮಿಡಿಯುತ್ತಿದ್ದ ಅವರ ಹೃದಯವನ್ನು ನೋಡಿ ನಮ್ಮೆಲ್ಲರ ಹೃದಯ ತುಂಬಿ ಬಂದಿತ್ತು.

ದುರದೃಷ್ಟವಶಾತ್ ಕ್ಯಾನ್ಸರ್‌ನ ಪೆಡಂಭೂತ ಅವರನ್ನು ಬಿಡಲಿಲ್ಲ. ಗುಣವಾಗಿದ್ದಾರೆ ಎಂದು ಸಮಾಧಾನವಾಗಿ ಹಿಂತಿರುಗಿದ್ದ ನನಗೆ, ಕೆಲವೇ ತಿಂಗಳಲ್ಲಿ ಅದು ಮತ್ತೆ ರಿಲ್ಯಾಪ್ಸ್ ಆಗಿದೆ ಎಂಬ ಸುದ್ದಿ ಸಿಡಿಲಿನಂತೆ ಎರಗಿತ್ತು. ಮೊನ್ನೆ ಡಿಸೆಂಬರ್ 15ರಂದು ಮತ್ತೆ ಭೇಟಿಯಾಗುವ ಅವಕಾಶ ಒದಗಿತ್ತು. ಬೆಂಗಳೂರಿನಿಂದ ಕೀಮೋಥೆರಪಿಯ ಮತ್ತೊಂದು ಚಿಕಿತ್ಸೆ ಮುಗಿಸಿ ಹಿಂತಿರುಗಿದ್ದ ಅವರು ತುಂಬಾ ಬಳಲಿದ್ದರು. ನನ್ನನ್ನು ನೋಡಿದಾಕ್ಷಣ “ಒಳ್ಳೆಯದಾಯಿತು, ನೀನು ಬಂದಿದ್ದು ವಸಂತ” ಎಂದರು.

“ಇನ್ನೇನು ಕೆಲವೇ ದಿನ ಮಾತ್ರ ನಾನು ಬದುಕಿರುವುದು” ಎಂದು ಹೇಳಿದ್ದರು. “ಚಿಂತೆ ಮಾಡಬೇಡಿ, ಒಳ್ಳೇ ಆಹಾರ ತೆಗೆದುಕೊಳ್ಳಿ, ವಿಶ್ರಮಿಸಿ, ಬೇಗನೇ ಗುಣವಾಗುತ್ತದೆ” ಎಂದದ್ದಕ್ಕೆ, “ಇನ್ನೇನು ಗುಣವಾಗುವುದಿಲ್ಲ, ಅದರ ಚಿಂತೆಯೂ ನನಗಿಲ್ಲ, ಆ ಭಗವಂತ ನನ್ನಂತಹ ಅತೀ ಸಾಮಾನ್ಯ ವ್ಯಕ್ತಿಯೊಬ್ಬನಿಂದ ಇಂತಹ ದೊಡ್ಡ ಕೆಲಸ ಮಾಡಿಸಿದನಲ್ಲ ಎಂಬ ಸಂತೃಪ್ತಿಯಿದೆ” ಎಂದು ನುಡಿದಿದ್ದರು ಆ ಮಹಾನ್ ಜೀವಿ. ಆ ಸಂತೃಪ್ತಿಯ ದಿವ್ಯ ಛಾಯೆ ಅವರ ರೋಗಗ್ರಸ್ತ ಕಳೆಗುಂದಿದ ಮುಖದಲ್ಲೂ ಎದ್ದು ಕಾಣಿಸಿತು. ಅಂತಹ ನೋವಿನಲ್ಲೂ ನನಗೆ ಅವರು ನಂದಗೋಕುಲ ಆಶ್ರಮವನ್ನು ಮತ್ತು ಸಂಧ್ಯಾದೀಪ ಆಶ್ರಮವನ್ನು ನೋಡಿಕೊಂಡು ಹೋಗಲು ಒತ್ತಾಯಿಸಿದರು. “ದೇವರೇ, ಒಂದು ಪವಾಡವನ್ನೇ ಮಾಡಿ, ಈ ಹಿರಿಯ ಜೀವವನ್ನು ಉಳಿಸಪ್ಪಾ” ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿ ನಾನು ಅವರಿಂದ ಬೀಳ್ಕೊಂಡಿದ್ದೆ.

Nanda Gokula Orphanage

ಅವರ ನಂದಗೋಕುಲ ಆಶ್ರಮದ ಹೊರಗಿನ ಕೋಣೆಯ ಗೋಡೆಯೊಂದರ ಮೇಲೆ ಅವರು “Those who live for others really live and those who live only for themselves are more dead than alive” ಎಂಬ ವಿವೇಕಾನಂದರ ಉಕ್ತಿಯನ್ನು ಬರೆಯಿಸಿದ್ದಾರೆ. ಅವರ ಸಂಪೂರ್ಣ ಜೀವನವನ್ನು ಈ ತತ್ತ್ವದ ಬುನಾದಿಯಲ್ಲೇ ಸವೆಸಿ ನಮ್ಮೆಲ್ಲರಿಗೆ ಒಂದು ಜ್ವಲಂತ ಉದಾಹರಣೆಯಾಗಿ ನಿಂತು ಇದೀಗ ಕಣ್ಮರೆಯಾಗಿದ್ದಾರೆ. ತಮ್ಮ ಇಡೀ ಜೀವನವನ್ನೇ ನೊಂದ ಮಕ್ಕಳ, ಹಿರಿಯರ ಮತ್ತು ಅನಾಥರ ಸೇವೆಗಾಗಿ ಮುಡುಪಿಟ್ಟ ಈ ಮಹಾನ್ ವ್ಯಕ್ತಿ ನಮ್ಮೆಲ್ಲರ ಮುಂದೆ ಒಂದು ದೊಡ್ಡ ಆದರ್ಶವನ್ನು ಇಟ್ಟು ಕಾಲನ ಕರಾಳ ತೆರೆಯ ಹಿಂದೆ ಸರಿದು ಹೋಗಿದ್ದಾರೆ. ಅವರ ಕಾರ್ಯಕ್ರಮಗಳು ಮತ್ತೂ ಯಶಸ್ಸಿನಿಂದ ಬೆಳಗಲಿ, ಅನೇಕ ನೊಂದ ಹೃದಯಗಳಿಗೆ ತಂಪನ್ನೆರೆಯಲಿ. ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಲಭಿಸಲು ಸಾಧ್ಯ.

Source:Oneindia.in

Related Posts: